ಪ್ರಾಣಿವಿಷ

       ಕೆಲವೊಂದು ಪ್ರಾಣಿಗಳು ತಮ್ಮಲ್ಲಿಯ ವಿಶಿಷ್ಟ ಗ್ರಂಥಿಗಳಿಂದ ಸ್ರವಿಸುವ ಮತ್ತು ಇತರ ಪ್ರಾಣಿಗಳಿಗೆ ಮಾರಕವಾಗಬಹುದಾದ ವಿಶಿಷ್ಟ ರಾಸಾಯನಿಕ (ವೆನಮ್). ಇದರೊಟ್ಟಿಗೆ ಹಲ್ಲು, ಕೊಂಡಿ ಮತ್ತಿತರ ಇರಿಯುವ ಸಾಧನಗಳಿಂದ ಗಾಯವನ್ನುಂಟುಮಾಡುವ ಸಾಮಥ್ರ್ಯವನ್ನು ಕೂಡ ಇವು ಪಡೆದಿರಬಹುದು. ವಿಷಸ್ರವಿಕೆಯಿಂದ ಇವು ತಮ್ಮ ಆಹಾರದ ಪ್ರಾಣಿಗಳನ್ನು ಕೊಲ್ಲಬಹುದು ಅಥವಾ ನಿಸ್ಸತ್ತ್ವಗೊಳಿಸಬಹುದು, ಇಲ್ಲವೆ ವಿಷವನ್ನು ಸ್ವರಕ್ಷಣೆಗಾಗಿ ಉಪಯೋಗಮಾಡಿಕೊಳ್ಳಬಹುದು. ವಿಷವಸ್ತು ಜೊಲ್ಲುಗ್ರಂಥಿಗಳ ರಚನೆಹೊಂದಿದ ಬಹಿಸ್ಸ್ರಾವ ಗ್ರಂಥಿಗಳಲ್ಲಿ ಸಿದ್ಧಗೊಂಡು ಸಂಗ್ರಹಿಸಲ್ಪಟ್ಟು, ಆ ಪ್ರಾಣಿಗಳು (ಹಾವು, ಕೀಟ, ಚೇಳು, ಜೇಡ, ಮೃದ್ವಂಗಿ, ಹುಳುಗಳು, ಮೀನಿನ ಕೆಲವು ಪ್ರಭೇದಗಳು) ಕಚ್ಚಿದಾಗ ಇಲ್ಲವೆ ಕುಟುಕಿದಾಗ ಹೊರಬರುತ್ತವೆ. ಇನ್ನು ಕೆಲವು ಪ್ರಾಣಿಗಳಲ್ಲಿ (ಕಂಬಳಿಹುಳು) ದೈಹಿಕ ಸಂಪರ್ಕವೇ ವಿಷ ಸೇರಿಕೆಗೆ ಅವಕಾಶ ಮಾಡಿಕೊಡುತ್ತದೆ. ಪ್ರಾಣಿವಿಷವಿರುವಂಥವು ಪ್ರಾಣಿಸಮುದಾಯದಲ್ಲಿ ಭಿನ್ನವಾಗಿ ಎದ್ದು ತೋರುತ್ತವೆ. ವಿಷಗ್ರಂಥಿಗಳು ಬಾಯೊಳಗೆ (ಸರ್ಪ, ಹಲ್ಲಿ), ಬಾಯಿಯ ಹೊರಗೆ (ಜೇಡ), ಬಾಲದ ಕಡೆ (ಚೇಳು), ಕಿಬ್ಬದಿ (ಜೇನು, ಕಡಂಜ) ಅಥವಾ ದೇಹದಾದ್ಯಂತ (ಕಂಬಳಿಹುಳು) ಇರಬಹುದು. ವಿಷ ಹೊರಹಾಕುವ ಪ್ರಾಣಿಗಳು ಮಾಂಸಾಹಾರಿಯಾಗಿ (ಸರ್ಪ, ಚೇಳು, ಜೇಡ) ತಮ್ಮ ಆಹಾರದ ಪ್ರಾಣಿಗಳನ್ನು ಜೀವಂತ ಹಿಡಿದು ಇಲ್ಲವೆ ನಿಶ್ಚಲಗೊಳಿಸಿ ಭಕ್ಷಿಸಬಹುದು ಅಥವಾ ಸಸ್ಯಾಹಾರಿಗಳಾಗಿರಬಹುದು. ಜೇನು, ಕಂಬಳಿಹುಳು ಕೀಟಗಳಲ್ಲಿ (ಜೇನು, ಕಡಂಜ) ಹೆಣ್ಣುಗಳು ಮಾತ್ರ ವಿಷಪೂರಿತ. ಉಳಿದ ಪ್ರಾಣಿಗಳಲ್ಲಿ ಈ ರೀತಿಯ ಲಿಂಗಭೇದವಿಲ್ಲ.

	ಕೆಲವೊಂದು ಪ್ರಾಣಿಗಳ ವಿಷ ಮಾನವದೇಹದ ಮೇಲೆ ತುಂಬ ತೀವ್ರಪ್ರಭಾವ ಬೀರಬಲ್ಲದ್ದಾಗಿದೆ. ಪ್ರಾಚೀನಕಾಲದಿಂದಲೂ ಪ್ರಾಣಿಗಳ ವಿಷದಿಂದಾಗುವ ಸಾವು ನೋವಿನ ಅನುಭವವನ್ನು ಮನುಷ್ಯ ಹೊಂದಿದ್ದಾನೆ. ಉಷ್ಣವಲಯ ಮತ್ತು ಸಮಶೀತೋಷ್ಣವಲಯದಲ್ಲಿ ವಿಷಪ್ರಾಣಿಗಳು ವಿಪುಲವಾಗಿ ಕಾಣಸಿಕ್ಕುತ್ತವೆ. ಭಾರತ ಮತ್ತು ಏಷ್ಯದ ಇತರ ಭಾಗಗಳಲ್ಲಿ ಪ್ರಾಣಿವಿಷದ ಪ್ರಭಾವಕ್ಕೆ ಸಿಲುಕಿ ಅನೇಕರು ಮರಣ ಹೊಂದುತ್ತಾರೆ. ಈ ಪ್ರಾಣಿಗಳು ಹಲ್ಲಿನಿಂದ ಕಚ್ಚಿದಾಗ ಇಲ್ಲವೆ ಕೊಂಡಿಯಿಂದ ಚುಚ್ಚಿದಾಗ ಉಂಟಾಗುವ ನೀರುಗಾಯದ ಮೂಲಕ ವಿಷ ಚರ್ಮದಡಿ ಸೇರುತ್ತದೆ. ಗ್ರಂಥಿನಾಳದಿಂದ ಸ್ಖಲನಗೊಂಡ ವಿಷ ಒಂದು ಮಿಲಿ ಲೀಟರಿನಷ್ಟು. ಅದು ವರ್ಣರಹಿತ ಮತ್ತು ಪಾರಕ. ವಿಷ ಅನೇಕ ರೀತಿಯ ಪ್ರೋಟೀನ್ ಅಂಶಗಳು, ಸಾವಯವ ವಸ್ತು, ರಂಜಕ ಮತ್ತು ಕಿಣ್ವಗಳನ್ನು ಹೊಂದಿರುತ್ತದೆ. ಹಾವಿನ ವಿಷ ತುಂಬ ಪ್ರಭಾವಶಾಲಿಯಾಗಿದ್ದು ನರಮಂಡಲದ ಮೇಲೆ ಪ್ರಭಾವವನ್ನು ಬೀರುತ್ತದೆ. ಈ ವಿಷದ ಪ್ರಭಾವದಿಂದ ಕೆಂಪುರಕ್ತಕಣಗಳಿಂದ ರಕ್ತವರ್ಣ ಹೊರಬರುತ್ತದೆ; ರಕ್ತ ಬಲುಬೇಗ ಹೆಪ್ಪುಗಟ್ಟಬಹುದು ಇಲ್ಲವೆ ಅದನ್ನು ಹೆಪ್ಪುಗಟ್ಟದಂತೆ ಮಾಡಬಹುದು. ಅದು ಸ್ನಾಯುಗಳನ್ನು ಉತ್ತೇಜಿಸುತ್ತದೆ ರಕ್ತೋದ್ರೇಕವನ್ನು ಉಂಟುಮಾಡುತ್ತದೆ.

	ಈ ಪ್ರಾಣಿಗಳು ಕಚ್ಚಿದ ಪ್ರದೇಶದಲ್ಲಿ ಉರಿತ, ಚುಮಚುಮ, ಬಾವು ಗೋಚರಿಸಿ ಅನಂತರ ವಿಸ್ತøತವಾಗಿ ಹರಡುತ್ತದೆ. ಗಂಟಲ ಉರಿತ, ನಾಲಿಗೆ ಉಬ್ಬು, ಓಕರಿಕೆ, ವಾಂತಿ, ಕಣ್ಣುಕತ್ತಲೆ, ಶಕ್ತಿಹೀನತೆ, ಬೆವರು, ಜೊಲ್ಲು, ಅಸ್ಥಿರತೆ, ಸ್ನಾಯುತತ್ತರಿಕೆ, ಹೊಟ್ಟೆನೋವು, ಸೆಳೆವು ತೋರಿಬರುತ್ತವೆ. ದೇಹಾದ್ಯಂತ ರಕ್ತೋದ್ರೇಕ, ರಕ್ತ ಒತ್ತಡದ ಇಳಿಕೆ, ಸ್ಪರ್ಶ ಶಕ್ತಿಯ ವ್ಯತ್ಯಯ, ಮಂಪರು, ಮೂತ್ರದ ಇಳುವರಿ, ಉಸಿರಾಟದ ತೊಂದರೆ ಮುಂತಾದವು 24-48 ಗಂಟೆಗಳ ಅವಧಿಯಲ್ಲಿ ಗೋಚರಿಸಿ, ಸಾವಿನಲ್ಲಿ ಪರ್ಯವಸಾನಗೊಳ್ಳಬಹುದು.

	ವಿಷಪ್ರಾಣಿಗಳ ಸೇರಿಕೆಗೆ ಅವಕಾಶ ಕೊಡದಂತೆ ಮನೆಯ ಸುತ್ತಣ ಪೊಟರೆಗಳನ್ನು ಮುಚ್ಚಬೇಕು. ರಾತ್ರಿಕಾಲದಲ್ಲಿ ಅರಿಯದ ಪ್ರದೇಶದಲ್ಲಿ, ಹುಲ್ಲುಗಾವಲಿನಲ್ಲಿ ಓಡಾಡುವಾಗ ಪಾದರಕ್ಷಣೆ ಮಾಡಿಕೊಳ್ಳಬೇಕು ಕಚ್ಚಿದ ಭಾಗವನ್ನು ಅಚಲ ಗೊಳಿಸುವುದು ಬಲುಮುಖ್ಯ. ಆಗ ಓಡಾಡುವುದು ನಿಷಿದ್ಧ. ಕಚ್ಚಿದ ಪ್ರದೇಶದಿಂದ ವಿಷ ಹೀರಿಕೆಯನ್ನು ತಡೆಯಲು, ಆ ಪ್ರದೇಶದ ಮೇಲ್ಭಾಗದಲ್ಲಿ ರಬ್ಬರ್ ಪಟ್ಟಿಯನ್ನು ಒತ್ತಿ ಕಟ್ಟಬೇಕು. ಕಚ್ಚಿದ ಪ್ರದೇಶದ ಮೇಲೆ ಒದ್ದೆಬಟ್ಟೆಯನ್ನಿರಿಸಬೇಕು. ಬಾವು ಹೆಚ್ಚಾದರೆ, ರಬ್ಬರ್ ಪಟ್ಟಿಯನ್ನು ಇನ್ನೂ ಮೇಲೆ ಕಟ್ಟಬೇಕಾಗುವುದು. ರಕ್ತ, ದುಗ್ಧರಸ ಪರಿಚಲನೆಗೆ ಅಡ್ಡಿ ಒದಗದಂತಾಗಿಸಲು ಅದನ್ನು ಆಗಾಗ್ಗೆ ಸಡಿಲಗೊಳಿಸಬೇಕು. ಕಚ್ಚಿದ ಕೆಲನಿಮಿಷಗಳಲ್ಲಿ, ಹಲ್ಲಿನ ಗಾಯ ಗುರುತಿಸಿ, ವಿಷದ ವಿರುದ್ಧ ನಿರ್ದಿಷ್ಟ ಎದುರು ಲಸಿಕೆಯನ್ನು (ಪ್ರತಿ ವಿಷ) ನೀಡುವುದು ಬಹುಮುಖ್ಯ. ಅದರ ಮೂರನೆಯ ಒಂದು ಭಾಗವನ್ನು ಚರ್ಮದಡಿ ಕಚ್ಚಿದ ಪ್ರದೇಶ ಮತ್ತು ಮುಂಡದ ಮಧ್ಯ ಇಲ್ಲವೆ ಕಚ್ಚಿದ ಪ್ರದೇಶದ ಸುತ್ತ ಕೊಟ್ಟು, ಉಳಿದುದನ್ನು ರಕ್ತನಾಳಾಂತರವಾಗಿ ಕೊಡಬೇಕು. ಅಲ್ಲದೆ ರಕ್ತ ಒತ್ತಡ ಕಾಯ್ದಿರಿಕೆ, ಆಕ್ಸಿಜನ್ ನೀಡಿಕೆ ಮತ್ತು ರಕ್ತ ಫೂರಣೆ ಅಗತ್ಯ.		(ನೋಡಿ ಹಾವಿನ ವಿಷಗಳು)
(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ